	ಟರ್ಬಟ್
	ಪ್ಲೂರೋನೆಕ್ಟಿಫಾರ್ಮೀಸ್û ಗಣಕ್ಕೆ ಸೇರಿದ ಒಂದು ಚಪ್ಪಟಿ ಮೀನು. ಇವಕ್ಕೆ ಯೂರೋಪಿನ ಫ್ಲೌಂಡರ್ ಎಂಬ ಹೆಸರೂ ಉಂಟು. ವೈಜ್ಞಾನಿಕ ಹೆಸರು ರಾಂಬಸ್ ಮ್ಯಾಕ್ಸಿಮಸ್. ಯೂರೋಪಿನ ಅಟ್ಲಾಂಟಿಕ್ ಕರಾವಳಿ ಹಾಗೂ ಮೆಡಿಟರೇನಿಯನ್ ಸಮುದ್ರಗಳಲ್ಲಿ ವಾಸಿಸುತ್ತದೆ. ಸಾಮಾನ್ಯವಾಗಿ ಇದರ ಉದ್ದ 60 ಸೆಂ.ವೀ. ತೂಕ 15 ಕೆ.ಗ್ರಾಂ.  ಕೆಲವು ಸಲ 90 ಸೆಂ.ಮೀ. ಉದ್ದ ಹಾಗೂ 45 ಕೆ.ಗ್ರಾಂ. ತೂಕವಿರುವುದೂ ಉಂಟು. ಕಂದು ಚುಕ್ಕೆಯುಳ್ಳ ದೇಹ ಹಾಗೂ ಅಗಲವಾದ ಬಾಯಿಯಿಂದ ಇದನ್ನು ಗುರುತಿಸಬಹುದು. ದೇಹ ಚಪ್ಪಟೆಯಾಗಿರುವುದರಿಂದ ಇದರ ಎರಡು ಕಣ್ಣುಗಳೂ ಎಡಭಾಗದಲ್ಲಿ ಮಾತ್ರ ಒಂದೇ ಕಡೆ ಇವೆ. ಕಣ್ಣುಗಳಿಗೆ ಸ್ವತಂತ್ರವಾಗಿ ಚಲಿಸಬಲ್ಲ ಸಾಮಥ್ರ್ಯ ಉಂಟು. ಟರ್ಬಟಿನ ಶರೀರ ಹುರುಪೆಗಳಿಂದಾವೃತವಾಗಿಲ್ಲ. ಅಸಂಖ್ಯಾತ ಶಂಖಾಕೃತಿಯ ಗ್ರಂಥಿಗಳು ಮಾತ್ರ ಉಂಟು. ಈ ಮೀನುಗಳು ಮತ್ಸ್ಯಾಹಾರಿಗಳು. ಇದು ವಸಂತಋತು ಹಾಗೂ ಬೇಸಿಗೆಯ ಆರಂಭದಲ್ಲಿ ಮೊಟ್ಟೆಯಿಡುತ್ತದೆ. ಮೊಟ್ಟೆಗಳ ಸಂಖ್ಯೆ ಅಗಾಧ; 5-10 ಮಿಲಿಯನ್‍ಗಳಷ್ಟು. ಮೊದಮೊದಲು ನೀರಿನ ಪಾತಳಿಯ ಮೇಲೆ ತೇಲುತ್ತಿರುವ ಈ ಮೊಟ್ಟೆಗಳು ಒಡೆಯುವ ಮುನ್ನ ನೀರಿನೊಳಗೆ ಮುಳುಗಿ ಬಿಡುತ್ತವೆ. ಡಿಂಬಗಳು ಸಮುದ್ರದ ತಳಭಾಗದಲ್ಲೇ ಓಡಾಡುತ್ತವೆ. ಆರಂಭದಲ್ಲಿ ಮರಿಮೀನುಗಳ ಕಣ್ಣುಗಳು ಸಹಜರೀತಿಯಲ್ಲಿ ತಲೆಯ ಆಚೀಚೆ ಇರುವುದಾದರೂ ಮೀನುಗಳ ರೂಪಾಂತರ ಕಾಲದಲ್ಲಿ ಬಲಭಾಗದ ಕಣ್ಣು ಎಡಭಾಗಕ್ಕೆ ಸರಿಯುತ್ತವೆ. ಟರ್ಬಟ್ ಅತ್ಯಂತ ಉಪಯುಕ್ತ ಆಹಾರ ಮೀನು ಎಂದು ಹೆಸರು ಗಳಿಸಿದೆ. ಯೂರೋಪಿನಾದ್ಯಂತ ಇದಕ್ಕೆ ಅತ್ಯಂತ ಹೆಚ್ಚಿನ ಬೇಡಿಕೆ ಉಂಟು. ಅಮೆರಿಕದ ಅಟ್ಲಾಂಟಿಕ್ ಕರಾವಳಿಯಲ್ಲಿ, ಯೂರೋಪಿನ ಫ್ಲೌಂಡರ್‍ಗೆ ಅತ್ಯಂತ ಸಮೀಪದ ಸಂಬಂಧಿಯಾದ ಅಮೆರಿಕದ ಟರ್ಬಟ್ ಅಥವಾ ಎಂಡೋಪ್ಯಾನ್ ಫ್ಲೌಂಡರ್ (ರಾಂಬಸ್ ಮ್ಯಾಕ್ಯುಲೇಟಸ್) ಎಂಬುದು ಜೀವಿಸುತ್ತದೆ.
(ಎಂ.ಇ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ